ಮಂಗಳವಾರ, ನವೆಂಬರ್ 18, 2014

ಕಾಲ ಪ್ರಯಾಣ

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

ಆಯಾಮವಿಲ್ಲದಿರೆ ಬಿಂದು
ದ್ವಿಗುಣಿಸಿ  ಸಾಲಾಯಿತು ಒಂದರಲಿ
ಎರೆಡನೆ ಆಯಾಮದಿ ಕಂಡಿತು ವೃತ್ತ
ವಾಯಿತು ಗೋಳ  ಕಣ್ಣರಳಿಸಿ ಜಗವ ನೋಡಲು

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

 ಗೋಳದ ಅಪರಿಮಿತ ಮಿತಿಯಲೆಮ್ಮ ಚಲನೆ
ಅಲ್ಲಿ ಇಲ್ಲಿ ಎಲ್ಲೋ ಅಲ್ಲಿ ಮಗದೊಮ್ಮೆ ಇಲ್ಲಿ
ಮೂರೂ ಆಯಾಮದಲಿ ಮನಬಂದಂತೆ ಅಲಿಯುತ
ಕಾಲಮಾನದಿ ಜಗವು ನಡೆಯುತಿಹುದು

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

ಆದರೆ ಕಾಲವಾದರೂ ಎಂತಹದು
ಗುಣ ಬದಲಾಯಿಸುವುದು ಗುರುತ್ವದೆದುರು
ಕಾಲದ  ವೇಗವೇ ತಗ್ಗುವುದು ಬಲವೇರಿದಂತೆ
ನಿಶ್ಚಲವಾಯಿತಿದು  ಕಪ್ಪು ರಂಧ್ರದಲಿ

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

ಅರಿವರೋ ಕಾಲವ ಗುರುತ್ವ ಮಾನದಲಿ
ಕಂಡರೋ ಕಾಲವ ನಲ್ಗನೆ ಆಯಾಮದಲಿ
ಈ ಹೊಸ ಆಯಾಮದಲಿ ದ್ವಿಗುಣಿಸಿ ಸಾಲಾಗುವುದೋ
ಭೂಗೋಳ, ಆಯಾಮ ಹೆಚ್ಚಿ ಚುಕ್ಕಿ ಸಾಲಾದಂತೆ

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ


ಈ ನಿರಂತರ ಸಾಲಿನ ಭೂಗೋಳ
ವೊಂದೊಂದು ಪ್ರತಿನಿಧಿಸುವುದೊಂದೊಂದು ಕಾಲ
ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಹೀಗೆ
ವಿವಿಧ ಕಾಲದ ಗೋಳಗಳಲಿ ಚಲಿಸಲು

ಆಯಿತಿದು ಕಾಲಯಾನ ಎಂದಳ್ತಿಯಿಂ  ನೋಡುತಿರೆ ಗುರುತ್ವಮಾನದೆಡೆಗೆ



ಮಂಗಳವಾರ, ನವೆಂಬರ್ 4, 2014

ಒಡಲು ಕಡಲು

ಒಡಲಿನ ಕಡಲಲಿ
ಕನಸೆಂಬ ಅಲೆಯೊಂದು 
ಜಗವೆಂಬ  ದಡದೆಡೆಗೆ 
ಹರಿಯುತಿದೆ , ಅದ್ಯಾಕೋ ಹಿಂದೆ ಸರಿಯುತಿದೆ 

ಮನದಲಿ ಕೊಂಚ ದುಗುಡ 
ಜೊತೆಗೆ ಜಗವನರಿಯುವ ತವಕ 
ಛಲಬಿಡದೆ ಭೋರ್ಗರೆಯುತಿದೆ ದಡದೆಡೆಗೆ 
ಆದರೂ ಅದೇಕೊ  ಹಿಂದೆ ಹಿಂದೆ ಸರಿಯುತಿದೆ 

ನೀರಿನ ಅಲೆಯೊಂದು ಜಗವ ಹರಿವುದೆಂತು 
ಎಂದು ನಕ್ಕರು , ಅಸಾಧ್ಯವೆಂದರು 
ಇವಲ್ಲದರ ನಡುವೆಯೂ , ಅಲೆಯು ಹರಿಯುತಿದೆ 
ಆದರೂ ಯಾಕೋ ಹಿಂದೆ ಹಿಂದೆ ಸರಿಯುತಿದೆ 

ಯಾರು ಬಲ್ಲರು ಪ್ರಕೃತಿ ಲೀಲೆ 
ಅಲೆಯು ಆವಿಯಾಗಿ, ತಣಿಯಿತು ಮೋಡವಾಗಿ 
ಮತ್ತೆ ಸೇರಿತು ಜಗವ ಹನಿಹನಿಯಾಗಿ 
ತೋಡಾಗಿ ಕವಲಾಗಿ ಜಗವ ತುಂಬಿತು ಜೀವನದಿಯಾಗಿ 

ಈ ಒಂದು ಕನಸು ಪಸರಿಸಿತು ಜಗಕೆ ಹಸಿರು 
ಜೊತೆಗೆ ಸಹಸ್ರಾರು ಜೀವಿಗಳಿಗೆ ಉಸಿರು 
ಅಚಲ ಪರಿಶ್ರಮದಿ ಕನಸಾಯಿತು ನನಸು 
ಇಂತಹ ಹಲವು ಕನಸುಗಳ ಸಮತೋಲನವೇ  ಪ್ರಕೃತಿ  
ಎಂದರಿತ ಕನಸು ಮತ್ತೆ ಸೇರಿತು ಒಡಲೆಂಬ ಕಡಲು 

ಶುಕ್ರವಾರ, ಸೆಪ್ಟೆಂಬರ್ 5, 2014

ಗುರು

ಏನ ಬರಿಯಲಿ ನಾ ಗುರುವಿನ ಮೇಲೆ 
ಬರಿಯಲು ಕಲಿಸಿದವರೇ ಅವರೆಂದ ಮೇಲೆ 

ಅಯ್ಯೋ ನನಗೆ ಪಾಠವೆಂದರೆ ಬಲು ಕಾಟ 
ಸದಾ ಅಲಿಯುತಿರಬೇಕು ಆಡುತ ಆಟ 
ಜಾಣ ನಾ ಮಾಡುವೆ ಲೆಕ್ಕವನ್ನೂ  ಕಂಠಪಾಠ 
ಮೇಸ್ಟರ ಕಂಡರೆ  ಸಾಕು ನಾ ಎಲ್ಲಿಗಾದರೂ ಓಟ 

ಏನ ಬರಿಯಲಿ ನಾ ಗುರುವಿನ ಮೇಲೆ 
ಬರಿಯಲು ಕಲಿಸಿದವರೇ ಅವರೆಂದ ಮೇಲೆ 

ಹವ್ಯಾಸೀ ಗುರು ಇವರು ಸಂಸಾರಕ್ಕೆ ನೌಕರಿ 
ಗಣಿತ ಬೋಧನೆಯಲ್ಲಿ ಎಲ್ಲರಿಗೂ ಮಾದರಿ 
ಮುಂಜಾನೆ ಮುಸ್ಸಂಜೆ ನಡೆಸುತಿದ್ದರು ಜ್ಞಾನದ ಹವನ 
ವಿದ್ಯಾರ್ಥಿಗಳೆಂಬ ಒಟುಗಳಿಗಿಟ್ಟು ವಿಧ್ಯಾದಾನ, ಅಜ್ಞಾನ ದಹನ 

ಏನ ಬರಿಯಲಿ ನಾ ಗುರುವಿನ ಮೇಲೆ 
ಬರಿಯಲು ಕಲಿಸಿದವರೇ ಅವರೆಂದ ಮೇಲೆ 

ಪಾಠದೊಂದಿಗೆ ಆಟ ಸೇರಿಸಿ ಸೆಳೆದರೆನ್ನ ಗಮನ 
ಮಧ್ಯೆ ಪ್ರಶ್ನೆ ಪರೀಕ್ಷೆಗಳು  ಮಾಡಿತಿದ್ದವು ಮಾಪನ
ಬಿದ್ದಷ್ಟೂ ಸಲ ಎಬ್ಬಿಸಿ ನಿಲ್ಲಿಸಿದರೀ ಜ್ಞಾನರೂಪ 
ಗುರುವೆಂದರೀನಂದೇ ಅರಿಯದ ನನಗಾದರು ದಾರಿದೀಪ 

ಏನ ಬರಿಯಲಿ ನಾ ಗುರುವಿನ ಮೇಲೆ 
ಬರಿಯಲು ಕಲಿಸಿದವರೇ ಅವರೆಂದ ಮೇಲೆ
 ಹಿಡಿಯುತಿರುವೆ ನಾ ವಿಧ್ಯಾದಾನದ ಹರಕೆ 
ಹೀಗಾದರೂ ಗುರುವಿನ ಋಣ ತೀರಿಸುವ ಬಯಕೆ 
 

ಶನಿವಾರ, ಆಗಸ್ಟ್ 30, 2014

ಆಸ್ತಿಕ ನಾಸ್ತಿಕ

ನಾಸ್ತಿಕರೆಂಬ  ಕುರುಡು ಆಸ್ತಿಕರು
ಆಸ್ತಿಕರೆಂಬ ಕುರುಡು ನಾಸ್ತಿಕರು
ಕಣ್ತೆರೆದು ಮಾಡರು ಅಂತರಂಗ ಶುದ್ಧಿ
ಬಹಿರಂಗ ಶುದ್ಧಿಯಲ್ಲೇ ಕರ್ಚು ಮಾಡುವರು ಇರುವ ಬುದ್ಧಿ

ಆಸ್ತಿಕರಾದರೋ ಮಾಡುವರು ಪೂಜೆ ಕಥೆ ಪುರಾಣ
ಕಥೆ ಹೇಳಿದಂತೆ ನಡೆದುಕೊಳ್ಳುವರು ಭಯದ ಕಾರಣ
ಚೌತಿಯ ಚಂದ್ರ ಕಂಡರೆ ಅರಿವರು  ಮಾನ ಹರಣ
ಭಯದಿ ಬದುಕುತಲಿಹರು ಅವನರಿಯದ ನಾಸ್ತಿಕರು

ಮಾನವೀಯತೆಯೇ ಧರ್ಮವೆಂದಿರುವ ನಾಸ್ತಿಕರು
ಜಾತಿ ಧರ್ಮ ದೇವರಿಂದ ದೂರ ಹೋದರು
ಕಟ್ಟುಪಾಡು ಮೀರಿದ ಪರಸಹಕಾರ ಸಹಾಯವೇ ಧ್ಯೇಯವೆಂದರು
ಈ ಧ್ಯೇಯವೇ ದೇವರೆನ್ನಲು ಆದರಿವರು  ಆಸ್ತಿಕರು

ಎಲ್ಲಿ ಪ್ರೀತಿ ಪ್ರೇಮವೆಂಬ ಭಕ್ತಿ ಇರುವುದೋ ಅಲ್ಲಿ ದೇವರು
ಎಲ್ಲಿ ಮಾನವೀಯತೆ ಹರಿವುದೋ ಅಲ್ಲಿ ದೇವರು
ಅರಿಯಿರಿ ಆಸ್ತಿಕ ನಾಸ್ತಿಕರೆನ್ನುವ ಮೊದಲು
ನೀವು ಭಯವೆಂಬ  ಭಕ್ತಿ ಇರುವ ಆಸ್ತಿಕರೋ ಇಲ್ಲ ಮಾನವೀಯತೆಯಿಲ್ಲದ ನಾಸ್ತಿಕರೋ 

ಶನಿವಾರ, ಮಾರ್ಚ್ 8, 2014

ಅವಳ್

ಅವಳ್  ಸ್ನೇಹಂ, ಕಾಮಂ, ಪ್ರೇಮಂ ,ಅವಳ್
ಕ್ಷಮಯಾದರಿತ್ರಿಂ ,ಸೌಂಧರ್ಯಘನಂ ,
ತನುಮನ ತ್ಯಾಗಮಯಿ ಅವಳ್ ,
                     ಅವಳ್ ಸೇರಿ ನಾ ಸಂಪೂರ್ಣಂ 

ಗೋಪಾಲ

ಅಲ್ಲವೇ ಅಲ್ಲ ನಾನಲ್ಲ  ಗೋಪಾಲ
ಆದರೂ ಯಾಕೋ ,ಕರೆಯುವರು ಸ್ತ್ರೀಲೋಲ

ಒಮ್ಮೆ ಬಸ್ ಸ್ಟಾಂಡಿಗೆ ಚೆಲುವೆಯೊಬ್ಬಳು ಬರಲು
ಅವಳ ದುಪಟ್ಟ ನನ್ನ ಮೇಲೆ ಹಾರಲು
ಕಣ್ಣಿಗೆ   ಕಣ್ಣು   ದೃಷ್ಟಿ  ತಾಗಲು
ಇಪ್ಪತ್ತರಲ್ಲೂ ನನಗಾಯಿತು ಅರಳು ಮರಳು

ಅಲ್ಲವೇ ಅಲ್ಲ ನಾನಲ್ಲ  ಗೋಪಾಲ
ಆದರೂ ಯಾಕೋ ,ಕರೆಯುವರು ಸ್ತ್ರೀಲೋಲ

ಬಿಡಲಾಗುವುದೇ ಇಂಥ ಚಾನ್ಸು
ಹಿಡಿಲೇಬೇಕು ಅವಳ ಹ್ಯಾಂಡ್ಸು
ಜೊತೆಗೆ ಮಾಡಲೇಬೇಕು ರೈನು ಡ್ಯಾನ್ಸು
Lifetime  plan  ಮಾಡ್ದೇ
                        family with two ಕಿಡ್ಸು

ಅಲ್ಲವೇ ಅಲ್ಲ ನಾನಲ್ಲ  ಗೋಪಾಲ
ಆದರೂ ಯಾಕೋ ,ಕರೆಯುವರು ಸ್ತ್ರೀಲೋಲ

ಅಷ್ಟರಲ್ಲೇ ಬರ್ಬೇಕೆ ದರಿದ್ರ ಬಸ್ಸು
ಚಲುವೆ ಆಗೋದ್ಲು ಕಣ್ ಮುಂದೇನೆ ಮಿಸ್ಸು
ನನ್ plans  ಎಲ್ಲಾ ಆಗೋದ್ವು ಠುಸ್ಸು
ಸುತ್ಲೂ ನೋಡ್ದೇ  ಇನ್ಯಾರಾದ್ರೂ ಇದಾರ ಬೇಬ್ಸು

ಅಲ್ಲವೇ ಅಲ್ಲ ನಾನಲ್ಲ  ಗೋಪಾಲ
ಆದರೂ ಯಾಕೋ ,ಕರೆಯುವರು ಸ್ತ್ರೀಲೋಲ

ಮಂಗಳವಾರ, ಮಾರ್ಚ್ 4, 2014

ಬಲಾತ್ಕಾರ

ಹೌದು ನನಗಾಯಿತು ಬಲಾತ್ಕಾರ
ನನ್ನ ಬಾಳಲಿ ತುಂಬಿತು ಅಂಧಕಾರ

ಬಲಿತ ಕನಸು ಬಯಕೆಗಳು ನೂರಾರು 
ಕ್ಷಣಮಾತ್ರದಲೇ ಆದವು ನುಚ್ಚುನೂರು
ಬಂಧಿಸಿದವು ಅಪರಿಚತನ ಬಾಹು
ಬದಕಿದ್ದಾಗಲೇ  ಕಂಡಿತು ಸಾವು

ಹೌದು ನನಗಾಯಿತು ಬಲಾತ್ಕಾರ
ನನ್ನ ಬಾಳಲಿ ತುಂಬಿತು ಅಂಧಕಾರ

ಸಮಾಜ ಮರೆಯಿತು ಕೊಡಲು ಸಮಾಧಾನದ ರಕ್ಷೆ
ಹೋದಲ್ಲಿ ಬಂದಲ್ಲಿ ಚುಚ್ಚುಮಾತಿನ ನಿಂದೆ
ಪೋಲಿಸಿರಿಗಿಲ್ಲ ಅವರ ಕೆಲಸದ ಧಕ್ಷೆ
ನನ್ನದಲ್ಲದ ತಪ್ಪಿಗೆ ಪಡಬೇಕಾಯಿತು ಶಿಕ್ಷೆ

ಈ ಸಮಾಜ ಇನ್ನೊಮ್ಮೆ ಮಾಡಿತು ಬಲಾತ್ಕಾರ
ಸಮಾಜ ನನ್ನ ಬಾಳಲಿ ತುಂಬಿತು ಅಂಧಕಾರ

ಉಷೆಯಿಂದ ಉದಯ, ಕತ್ತಲಿಂದ ಬೆಳಕು
ನನ್ನ ಬದುಕಿನಲ್ಲೂ ಬರುವುದೆಂಬ ಚಿಕ್ಕ ಹುರುಪು
ಉಳಿಸುವುದೇ ಈ ಸಮಾಜ ಇವಳ ಆಶಾಕಿರಣ
ಇಲ್ಲ ನಂದಿಸಿ ಮಾಡುವುದೇ ಇವಳ ಬದುಕ ಸ್ಮಶಾಣ ಮೌನ

ನನಗಾಗಿದ್ದು ಕೇವಲ ಬಲಾತ್ಕಾರ
ಅದರ ಹೆಸರಲಿ ಸಮಾಜ ಮಾಡದಿರಲಿ ಮತ್ತೊಮ್ಮೆ ಅತ್ಯಾಚಾರ 

ಶನಿವಾರ, ಮಾರ್ಚ್ 1, 2014

ಹುಡುಕುತಿರುವೆ

ಹುಡುಕುತಿರುವೆ ನಾ  ನಿನ್ನ
ಹಗಲು ಇರುಳೆನ್ನದೆ ,ಹುಡುಕುತಿರುವೆ ನಾ  ನಿನ್ನ

ಇರುಳ ಕಡಲ ದಿಕ್ಸೂಚಿ ನೀನು 
 ನಿನ್ನರಸಿ ಬರುತಿರುವ ನಾವಿಕ  ನಾನು 
ಅಲೆಗಳ  ಏರಿಳಿತದಲಿ ಮರೆಯಾಗುತಿರುವೆ  ನೀನು 
ಮತ್ತೊಮ್ಮೆ  ಎಂದೋ ಹೊಳೆದು  ನಗುತಲಿರುವೆ  ನೀನು 

ಹುಡುಕುತಿರುವೆ ನಾ  ನಿನ್ನ
ಹಗಲು ಇರುಳೆನ್ನದೆ ,ಹುಡುಕುತಿರುವೆ ನಾ  ನಿನ್ನ 

ಈ  ಅಲೆಗಳ ಆಟದಲಿ ದಾರಿ ತಪ್ಪಿದೆ ನಾನು 
ಅಂಧಕಾರದಲಿ ಕಳೆದು ಹೋದೆ ನಾನು 
ತಿರುಗಿ ಬರಲಾರದಷ್ಟು ಮುಂದೆ ಸಾಗಿದೆ ನಾನು 
ಬದುಕಿನ ಕಣ್ಣಾ ಮುಚ್ಚಾಲೆಯ ಗೊಂಬೆಯಾದೆ ನಾನು 

ಹುಡುಕುತಿರುವೆ ನಾ  ನಿನ್ನ
ಹಗಲು ಇರುಳೆನ್ನದೆ ,ಹುಡುಕುತಿರುವೆ ನಾ  ನಿನ್ನ 

ನಾವಿಕನೆಂದೂ ಸೋಲ ಒಪ್ಪನು 
ಮತ್ತೆ ಬರುವೆನು ನಿನ್ನ ಬಳಿಗೆ 
ಮತ್ತಷ್ಟು ಬೆಟ್ಟದಷ್ಟು ಪ್ರೇಮದೊಂದಿಗೆ 
ಆ  ಚಿಕ್ಕ ನಗುವ ಕಾಣಲು ನಿನ್ನ ಮೊಗದಲಿ 
ಆ ಹೊಳಪ ಕಾಣಲು ನಿನ್ನ ಕಣ್ಣಲಿ