ಒಡಲಿನ ಕಡಲಲಿ
ಕನಸೆಂಬ ಅಲೆಯೊಂದು
ಜಗವೆಂಬ ದಡದೆಡೆಗೆ
ಹರಿಯುತಿದೆ , ಅದ್ಯಾಕೋ ಹಿಂದೆ ಸರಿಯುತಿದೆ
ಮನದಲಿ ಕೊಂಚ ದುಗುಡ
ಜೊತೆಗೆ ಜಗವನರಿಯುವ ತವಕ
ಛಲಬಿಡದೆ ಭೋರ್ಗರೆಯುತಿದೆ ದಡದೆಡೆಗೆ
ಆದರೂ ಅದೇಕೊ ಹಿಂದೆ ಹಿಂದೆ ಸರಿಯುತಿದೆ
ನೀರಿನ ಅಲೆಯೊಂದು ಜಗವ ಹರಿವುದೆಂತು
ಎಂದು ನಕ್ಕರು , ಅಸಾಧ್ಯವೆಂದರು
ಇವಲ್ಲದರ ನಡುವೆಯೂ , ಅಲೆಯು ಹರಿಯುತಿದೆ
ಆದರೂ ಯಾಕೋ ಹಿಂದೆ ಹಿಂದೆ ಸರಿಯುತಿದೆ
ಯಾರು ಬಲ್ಲರು ಪ್ರಕೃತಿ ಲೀಲೆ
ಅಲೆಯು ಆವಿಯಾಗಿ, ತಣಿಯಿತು ಮೋಡವಾಗಿ
ಮತ್ತೆ ಸೇರಿತು ಜಗವ ಹನಿಹನಿಯಾಗಿ
ತೋಡಾಗಿ ಕವಲಾಗಿ ಜಗವ ತುಂಬಿತು ಜೀವನದಿಯಾಗಿ
ಈ ಒಂದು ಕನಸು ಪಸರಿಸಿತು ಜಗಕೆ ಹಸಿರು
ಜೊತೆಗೆ ಸಹಸ್ರಾರು ಜೀವಿಗಳಿಗೆ ಉಸಿರು
ಅಚಲ ಪರಿಶ್ರಮದಿ ಕನಸಾಯಿತು ನನಸು
ಇಂತಹ ಹಲವು ಕನಸುಗಳ ಸಮತೋಲನವೇ ಪ್ರಕೃತಿ
ಎಂದರಿತ ಕನಸು ಮತ್ತೆ ಸೇರಿತು ಒಡಲೆಂಬ ಕಡಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ