ಶನಿವಾರ, ಅಕ್ಟೋಬರ್ 10, 2015

ಹೀಗೊಂದು ಗೆಳೆತನ

ಹೀಗೊಂದು ಗೆಳೆತನ
ಇದಕಿಲ್ಲ ಆಧುನಿಕತೆಯ ಸಿರಿತನ

ಕಿರುನಗುವಿನ ಸ್ವಾಗತ
ಕಣ್ಣೋಟದಲೇ  ಸಿಹಿಮಾತು
ಕಾಣದಿದ್ದರೆ ಮಾತ್ರ ಏನೋ ದುಗುಡ
ಇದು ಬಸ್ಸಿನಲ್ಲಿ ಪಯಣಿಸುವ ಅಪರಿಚಿತರ ಪರಿಚಯ

ಈ ಸ್ನೇಹಕೆ ಬೇಕಿಲ್ಲ ಜಂಗಮದ ಕೊಂಡಿ
ಅಂತರ್ಜಾಲವೆಂದೂ ಮಾಡದು ಸಂಧಿ
ಎಮ್  ಪೆಸರನೂ ಸರಿಯಾಗಿ ಅರಿಯದವರು
ಬಸ್ ಎಂಬ ಲೋಕದಲ್ಲಷ್ಟೇ ಚಿರಪರಿಚಿತರು

ಬದುಕ ಬಂಡಿಯ ಈ ಯಾನದೊಳು
ರಂಗ ತುಂಬುವರು ,ನಲಿವ ಹಂಚುವರು
ಅಡರು ತೊಡರಿನ ಈ ರಸ್ತೆಯಲಿ
ದಟ್ಟಣೆಯೊಡನೆ ಮಂದಗತಿಯಲಿ ಸಾಗುವ ನಮ್ಮೀ  ಯಾನದಲಿ

ಕಾಯುವಿಕೆಯ ಕಾವು ಇಲ್ಲೂ ಉಂಟು
ನಮ್ಮ ಬಂಡಿಗಾಗಿ,ಅವರ ಬರುವಿಗಾಗಿ
ಬರದಿದ್ದರೆ ಕಾವಿನ ಕಸುವು,ಕಾಯುತಲಿರುವುದು
ಭೂಮಿಯ ಮತ್ತೊಂದು ಸುತ್ತಿಗೆ,ಮತ್ತದೇ ಸಮಯಕೆ ಅವರ ಬರುವಿಕೆಗೆ

ಬಂಡಿಯಲ್ಲಿಯೇ ಇದರ ಉಗಮ ಇಲ್ಲಿಯೇ ಅಂತ್ಯ
ಇದರಾಚೆ ಮತ್ತದೇ ಜಂಗಮ ಅಂತರ್ಜಾಲದಿ ವಿಹರ
ಇವುಗಳಿಗಿಂತ ಬಲು ವಿಶಿಷ್ಟ ಈ ಗೆಳೆತನ
ಇದಕಿಲ್ಲ ಆಧುನಿಕತೆಯ ಸಿರಿತನ






4 ಕಾಮೆಂಟ್‌ಗಳು: